ಅದೊಂದು ಮನೆಯಲ್ಲಿ ಊಟದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಸಾಮಾನ್ಯವಾಗಿ ಎಲ್ಲ ತಾಯಂದಿರ ಒಂದು ಸಮಸ್ಯೆ ತನ್ನ ಮಗು ಸರಿಯಾಗಿ ತಿನ್ನುವುದಿಲ್ಲ ಅನ್ನುವುದು.
ಹೀಗಿರುವಾಗ ಆ ಕಾರ್ಯಕ್ರಮಕ್ಕೆ ಬಂದಿದ್ದ ವೈದ್ಯನ ಹತ್ತಿರ ಬಂದ ಒಬ್ಬಳು ತಾಯಿ ನನ್ನ ಮಗು ಸರಿಯಾಗಿ ಊಟ ಮಾಡುತ್ತ ಇಲ್ಲ. ಅದಕ್ಕೆ ಹಸಿವಾಗಲೂ ಯಾವುದಾದರೂ ಮದ್ದು ಇದ್ದರೆ ಬರೆದು ಕೊಡಿ ಡಾಕ್ಟರ್ ಅಂತಾಳೆ. ಇದನ್ನೆಲ್ಲ ದೂರದಲ್ಲೇ ನಿಂತು ಗಮನಿಸುವ ಆ ಪುಟ್ಟ ಹುಡುಗಿ, ಆದೆ ಮನೆಯಲ್ಲಿ ಕೆಲಸ ಮಾಡುವಳಾಗಿರುತ್ತಾಳೆ. ಬಡತನದ ಬೇಗೆಯನ್ನು ಸಹಿಸಿ ನೊಂದಿರುವ ಜೀವವದು. ನಿಸ್ತೇಜವಾದ ಕಣ್ಣು ಬಡಕಲು ಶರೀರ.

ಸ್ವಲ್ಪ ಹೊತ್ತಿಗೆ ಮೆಲ್ಲನೆ ಬಂದ ಆ ಹುಡುಗಿ ಅದೇ ವೈದ್ಯನ ಹತ್ತಿರ ಬಂದು ತನಗೂ ಒಂದು ಮದ್ದು ಬೇಕು ಅನ್ನುತ್ತಾಳೆ. ಅವಳು ಹೇಳಿದನ್ನು ಕೇಳಿ ಆ ವೈದ್ಯನೂ ದಂಗಾಗಿ ಹೋಗುತ್ತಾನೆ. "ಡಾಕ್ಟರ್, ಹಸಿವೆನೇ ಆಗದೆ ಇರುವಂತ ಮದ್ದು ಇದ್ದರೆ ಬರೆದು ಕೊಡಿ. ನನಗೆ ನನ್ನ ತಮ್ಮನಿಗೆ ಮತ್ತೆ ನನ್ನ ಅಮ್ಮನಿಗೆ". ಬಹುಶಃ ಈ ಮಾತು ಅದೆಂಥವನ ಮನಸ್ಸನ್ನು ಕರಗಿಸಬಹುದು. ಕ್ಷಣಕಾಲ ನಾನು ಕೂಡ ಬೆಚ್ಚಿಬಿದ್ದಿದ್ದೆ. ಈ ಹಸಿವು ಅನ್ನುವುದು ನಮ್ಮನ್ನು ಆದ್ಯಾವ ಮಟ್ಟಿಗೆ ದೈನೇಸಿ ಮಾಡಿ ಬಿಡುತ್ತದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಈ ಜೀವಗಳ ನೋವು ಯಾರಿಗೂ ಅರಿಯಲು ಸಾಧ್ಯವಿಲ್ಲ.
ಈ ಭೂಮಿಯ ಮೇಲಿನ ಸಕಲ ಜೀವರಾಶಿಗೂ ಹಸಿವಿನ ಅರಿವು ಇದ್ದೇ ಇರುತ್ತದೆ.. ಇಲ್ಲಿ ಹುಟ್ಟಿನ ಜೊತೆಗೆ ಹಸಿವೂ ಜನ್ಮ ತಾಳಿರುತ್ತದೆ. ಹಸಿವು ಸಕಲ ಜೀವರಾಶಿಯನ್ನು ಕಾಡುವ ಒಂದು ದಾರುಣ ಸ್ಥಿತಿ.
ಹೆಣ್ಣು ಮಕ್ಕಳ ಹೆಗಲಿಗೆ ನೊಗ ಹೊರಿಸಿದ ಬಡ ರೈತ
ಆವತ್ತು ನಾನು ನೋಡಿದ ಆ ಹುಡುಗನ ಸ್ಥಿತಿಯೂ ಹೀಗೆ ಇತ್ತು.. ಹರಿದ ಬಟ್ಟೆಯನ್ನು ಕಚ್ಚಿಕೊಂಡು ಅದೇನನ್ನೋ ಹೇಳುತ್ತಿದ್ದ.. ಎಲ್ಲರೂ ಕುತೂಹಲದಿಂದ ಅವನ ಕಡೆ ನೋಡುತ್ತಿದ್ದರು. ಅವನು ಹೊಟ್ಟೆ ತೋರಿಸಿ ಹಸಿವು ಅಂತ ಪೆಕರುಪೆಕರಾಗಿ ಹೇಳುವಾಗ ನಗುವವರೇ ಜಾಸ್ತಿಯಾಗಿದ್ದರು. ಪಾಪ ಅದೆಷ್ಟು ಹಸಿವಾಗಿತ್ತೊ? ಯಾರೋ ಒಬ್ಬರು ಒಂದು ಬ್ರೆಡ್ ಕೊಟ್ಟರು. ಅದನ್ನಾತ ಗಬಗಬನೇ ತಿಂದು ಮುಗಿಸಿದ.