ಇದು ಅಮೇರಿಕದಲ್ಲಿ ನಡೆದ ನಿಜ ಜೀವನದ ಘಟನೆಯಂತೆ.
ಆ ಗಂಡ ಹೆಂಡತಿ ಇಬ್ಬರು ಪ್ರೀತಿಸಿ ಮದುವೆಯಾದರು. ಇಪ್ಪತ್ತು ವರ್ಷಗಳ ಕಾಲ ಹೇಗೋ ಏನೋ ಗಂಡ-ಹೆಂಡಿರಂತೆ ಜೀವನ ನಡೆಸಿದರು. ಆತನಿಗೆ ಬಿಡುವಿಲ್ಲದಷ್ಟು ಕೆಲಸ. ಮನೆಯ ಕಡೆ, ಮಡದಿಯ ಕಡೆ ಸ್ವಲ್ಪ ಗಮನ ಕಡಿಮೆ. ಇದ್ದಕ್ಕಿದ್ದಂತೆ ಒಂದು ದಿನ ಹೆಂಡತಿ ಕೇಳಿದಳು-"ನಾನು ಇಂದೇ ಸತ್ತರೇ ನನ್ನ ಅಂತ್ಯಕ್ರಿಯೆ ಹೇಗೆ ಮಾಡುತ್ತೀರಿ?"ದಿಢೀರ್ ಪ್ರಶ್ನೆಯಿಂದ ಸ್ವಲ್ಪ ವಿಚಲಿತನಾದ ಗಂಡ ಸಾವರಿಸಿಕೊಂಡು ಉತ್ತರಿಸಿದ-"ತುಂಬಾ ಪುಷ್ಪಗುಚ್ಛಗಳು, ಬೆಲೆಬಾಳುವ ಶವಪೆಟ್ಟಿಗೆ, ನಿನ್ನ ಗುಣಗಾನ ಮಾಡಿ ಆತ್ಮಕ್ಕೆ ಶಾಂತಿಯನ್ನು ಕೋರುವ ಪ್ರಾರ್ಥನಾ ಸಭೆಗಳು ಮುಂತಾದವೆಲ್ಲ ಇರುತ್ತವೆ. ಅದಿರಲ್ಲಿ ಏಕೆ ಈ ಪ್ರಶ್ನೆ ?
ಹೆಂಡತಿ ಪ್ರಶ್ನಿಸಿದಳು "ಇದ್ದಕ್ಕೆಲ್ಲ ತುಂಬಾ ಖರ್ಚಾಗುವುದಿಲ್ಲವೆ?" ಗಂಡ ಹೇಳಿದ "ಹತ್ತಾರು ಸಾವಿರ ಡಾಲರ್ ಖರ್ಚಾಗಬಹುದು. ಆದರೆ ಅದು ನನ್ನ ಕರ್ತವ್ಯವಲ್ಲವೇ?" ಹೆಂಡತಿ ಹೇಳುತಾಳೆ-ನಾನು ಸತ್ತಮೇಲೆ ನೀವು ಕೊಡುವ ಸಾವಿರಾರು ಡಾಲರ್, ಬೆಲೆಬಾಳುವ ಪುಷ್ಪಗುಚ್ಛಗಳನ್ನು ನಾನು ನೋಡಲಾಗುವುದಿಲ್ಲ. ಗುಣಗಾನದ ಮಾತುಗಳನ್ನು ಕೇಳಲಾಗುವುದಿಲ್ಲ. ಇವೆಲ್ಲ ನನಗೇನೂ ಪ್ರಯೋಜನವಾಗುವುದಿಲ್ಲ ಏಕೆಂದರೆ ನಾನು ಕಳೇಬರವಾಗಿರುತ್ತೇನೆ. ಅದರ ಬದಲು ನಾನು ಬದುಕಿರುವಾಗಲೇ ಒಂದು ಗುಲಾಬಿ ಹೂವು ಕೊಡಬಾರದೆ? ಒಂದು ಪ್ರೀತಿಯ ಮಾತು ಆಡ ಬಾರದೆ?" ಈ ಮುಗ್ದ ಮಾತು ಗಂಡನ ಹೃದಯ ಕಲುಕಿತು. ಅಂದಿನಿಂದ ಜೀವನ ಶೈಲಿಯೆ ಬದಲಾಯಿತು.
"ನಾನು ಬದುಕಿದಾಗಲೇ ಒಂದು ಗುಲಾಬಿ ಕೊಡಬಾರದೆ? ಒಂದು ಪ್ರೀತಿಯ ಮಾತು ಆಡಬಾರದೆ?" ಎಂಬ ಪ್ರಶ್ನೆ ಕೇಳಿಬರುತ್ತಿರುವುದು ಅಮೇರಿಕದಲ್ಲಿ ಮಾತ್ರವೇ ಅಲ್ಲ, ನಮ್ಮ ದೇಶದಲ್ಲಿ,ಊರಿನಲ್ಲಿ, ಮನೆಯಲ್ಲೆ ಇಂತಹ ಹಲವಾರು ಪ್ರಶ್ನೆಗಳು ಕೇಳಿ ಬರುತ್ತಿರಬಹುದು . ಆದರೆ ನಮಗೆ ಕೇಳಿಸದೆ ಹೋಗಿರಬಹುದು. ಅವರು ಸತ್ತ ಮೇಲೆ ದೊಡ್ಡ ಫೋಟೋ , ಅದಕ್ಕೋಂದು ಹಾರ , ಸಂತಾಪ ಸೂಚಕ ಸಭೆಗಳು , ಅವರ ಅಮೂಲ್ಯವಾದ ಸೆವೆಯ ಬಗ್ಗೆ ಭಾಷಣಗಳು, ನಿಮಿಷಗಟ್ಟಲೆ ಮೌನ, ಕೊಡಗಟ್ಟಲೆ ಕಣ್ಣೀರು,ಇವೆಲ್ಲವು ನಿಷ್ಪ್ರಯೊಜಕ. ಏಕೆಂದರೆ ನಿರ್ಜೀವ ಕಳೇಬರಕ್ಕೇ ಇದಾವುದರ ಪರಿವೆಯೂ ಇರುವುದಿಲ್ಲ. ಅವರ ಕಣ್ಣುಗಳಿಗೆ ಹೂಗಳನ್ನುನೋಡಿ ಆನಂದಿಸುವ ಶಕ್ತಿ ಇರುವಾಗ,ಏಕೆ ಹೂ ಕೊಡಬಾರದು? ಅವರ ಕಿವಿಗಳಿಗೆ ಅವರ ಬಗ್ಗೆ ಆಡುವ ಒಳ್ಳೆಯ ಮಾತುಗಳನ್ನು ಕೇಳಿ ಆನಂದಿಸುವ ಶಕ್ತಿ ಇರುವಾಗ ಏಕೆ ಆಡಬಾರದು? ಇದು ನಾವು ಅವರಿಗೆ ತೀರಿಸಬೆಕಾದಸಾಲ !ಸತ್ತ ಮೇಲಲ್ಲ, ಬದುಕ್ಕಿದ್ದಾಗ. ಸತ್ತ ಮೇಲೆ ಹಾಕುವುದು ಪಿಂಡ! ಅದು ದಂಡ!