
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಟ್ವಿಟ್ಟರ್ ಮುಖ್ಯ ಕಾಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಜಾಕ್ ಡಾರ್ಸಿ ರಾಜೀನಾಮೆ ನೀಡಿದ್ದರು. ನಂತರ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರು ಸಿಇಒ ಆಗಿ ಆಯ್ಕೆಯಾಗಿದ್ದರು. ಪರಾಗ್ ಅಗರ್ವಾಲ್ ಅವರು ಟ್ವಿಟ್ಟರ್ ಸಿಇಒ ಆಗಿ ಒಂದು ವರ್ಷ ಪೂರ್ಣಗೊಳಿಸುವ ಮೊದಲೇ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಸಂಸ್ಥೆಯನ್ನೇ ಖರೀದಿಸಿದ್ದಾರೆ.
ಜಾಕ್ ಡಾರ್ಸೆ ಅವರು 2019ರಲ್ಲೇ 'ಬ್ಲೂಸ್ಕೈ' (Bluesky) ಎಂಬ ಸಂಸ್ಥೆಯನ್ನು ನೋಂದಣಿ ಮಾಡಿಸಿದ್ದರು ಎಂದು ತಿಳಿದುಬಂದಿದೆ. ಈ ಹೊಸ ಸಂಸ್ಥೆಯು ಹೊಸದಾಗಿ ವಿಕೇಂದ್ರೀಕೃತ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಮೇಲೆ ಕಾರ್ಯನಿರ್ವಹಿಸಲಿದ್ದು, ಇದಕ್ಕೆ 'ಬ್ಲೂಸ್ಕೈ' ಎಂದೇ ಹೆಸರಿಸಬಹುದು ಎನ್ನಲಾಗಿದೆ. ಈಗಾಗಲೇ ಈ ಹೊಸ ವಿಕೇಂದ್ರೀಕೃತ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಅನ್ನು ಬೀಟಾ ಟೆಸ್ಟರ್‌ಗಳಿಗಾಗಿ ಬಿಡುಗಡೆ ಮಾಡಲಾಗಿದ್ದು, ಆಸಕ್ತರು ಟೆಸ್ಟರ್‌ಗಳಾಗಲು ನೋಂದಣಿ ಮಾಡಿಕೊಳ್ಳಬಹುದು. ಈ ಅಪ್ಲಿಕೇಷನ್ ಅನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿದ ನಂತರ ಬೃಹತ್ ಬಿಡುಗಡೆ ಯೋಜನೆಗೆ ಜಾಕ್ ಡಾರ್ಸಿ ಅವರು ಯೋಜಿಸಿರಬಹುದು. ಈ ಬಗ್ಗೆ ನಾವು ಕೂಡ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ವಿಶ್ವದ ಪ್ರಮುಖ ಟೆಕ್ ಮಾಧ್ಯಮಗಳು ವರದಿಗಳಲ್ಲಿ ಹೇಳಿವೆ.
ವಿಶ್ವದ ಆಗರ್ಭ ಶ್ರೀಮಂತ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸಿದ ನಂತರ ಪ್ರಕಟಿಸಿದ ಟ್ವೀಟ್ ಇತ್ತೀಚಿಗಷ್ಟೇ ವೈರಲ್ ಆಗಿತ್ತು. ಎಲಾನ್ ಮಸ್ಕ್ ಮತ್ತು ಟ್ವಿಟ್ಟರ್ ನಡುವಿನ ಮಾರಾಟ ಒಪ್ಪಂದವು ಪೂರ್ಣವಾದ ಬೆನ್ನಲ್ಲೇ, 'ಹಕ್ಕಿ ಈಗ ಸ್ವತಂತ್ರವಾಗಿದೆ' (the bird is freed) ಎಂದು ಹೇಳಿ ಟ್ವಿಟ್ಟಿಸಿದ್ದರು. ಈ ಮೂಲಕ ಟ್ವಿಟ್ಟರ್ ಇನ್ಮುಂದೆ ಅಭಿವ್ಯಕ್ತಿ ಸ್ವಾತಂತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಿದೆಯಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ 44 ಶತಕೋಟಿ ಡಾಲರ್ ಮೊತ್ತದ (ಸುಮಾರು ರೂ. 3,62,100 ಕೋಟಿ) ಎಲಾನ್ ಮಸ್ಕ್ ಮತ್ತು ಟ್ವಿಟ್ಟರ್ ನಡುವಿನ ಮಾರಾಟ ಒಪ್ಪಂದಕ್ಕೆ ಗುರುವಾರ ತಡರಾತ್ರಿ ಅಂತಿಮ ಮದ್ರೆ ಬಿದ್ದಿತ್ತು. ಇದರ ಬೆನ್ನಲ್ಲೇ ಭಾರತ ಮೂಲದ ಸಿಇಒ ಪರಾಗ್ ಅಗರ್‌ವಾಲ್ ಅವರನ್ನು ಟ್ವಿಟ್ಟರ್ ನಿಂದ ವಜಾಗೊಳಿಸಲಾಗಿತ್ತು.