Singer Vani Jairam Death: ಭಾರತದ 19 ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ಹೆಸರಾಂತ ಹಿರಿಯ ಗಾಯಕಿ ವಾಣಿ ಜಯರಾಮ್ ಅವರು ನಿಧನರಾಗಿದ್ದಾರೆ. ಇದೀಗ ಪೊಲೀಸರು ಇದು ಸಹಜ ಸಾವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು, 'ಅನುಮಾನಾಸ್ಪದ ಸಾವು' ಪ್ರಕರಣ ದಾಖಲಿಸಿದ್ದಾರೆ. ಗಾಯಕಿ ವಾಣಿ ಜಯರಾಮ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಹೈಲೈಟ್ಸ್:
- ಬಹುಭಾಷಾ ಗಾಯಕಿ ವಾಣಿ ಜಯರಾಮ್ ಅವರು ಇಂದು (ಫೆ.4) ಬೆಳಗ್ಗೆ ನಿಧನರಾಗಿದ್ದಾರೆ
- ವಾಣಿ ಜಯರಾಮ್ ಅವರದ್ದು ಸಹಜ ಸಾವಲ್ಲ ಎಂದು ಪ್ರಕರಣ ದಾಖಲಿಸಲಾಗಿದೆ
- ವಾಣಿ ಜಯರಾಮ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ
ಒಂಟಿಯಾಗಿ ವಾಸಿಸುತ್ತಿದ್ದ ವಾಣಿ ಜಯರಾಮ್
ಗಾಯಕಿ ವಾಣಿ ಜಯರಾಮ್ ಅವರ ಪತಿ ಜಯರಾಮ್ ಅವರು 2018ರಲ್ಲಿ ನಿಧನರಾಗಿದ್ದರು. ಆನಂತರ ವಾಣಿ ಜಯರಾಮ್ ಅವರು ಚೆನ್ನೈನ ನುಂಗಂಬಕ್ಕಂನಲ್ಲಿರುವ ನಿವಾಸದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ವಾಣಿ ಜಯರಾಮ್ ಅವರು ಸಹಾಯಕ್ಕಾಗಿ ಓರ್ವ ಮಹಿಳೆಯನ್ನು ನೇಮಿಸಿಕೊಂಡಿದ್ದರು. ಎಂದಿನಂತೆ ಮನೆಗೆಲಸದ ಮಹಿಳೆ ಇಂದು (ಫೆ.4) ಬೆಳಗ್ಗೆ ಬಾಗಿಲು ತಟ್ಟಿದ್ದಾರೆ, ಪದೇ ಪದೇ ಬೆಲ್ ಮಾಡಿದ್ದಾರೆ. ವಾಣಿ ಅವರು ಬಾಗಿಲು ತೆರೆದಿಲ್ಲ. ಒಳಗಿನಿಂದಲೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ತಕ್ಷಣವೇ ಅವರು ವಾಣಿ ಜಯರಾಮ್ ಅವರ ಸಹೋದರಿ ಉಮಾ ಅವರಿಗೆ ಮಾಹಿತಿ ನೀಡಿದ್ದಾರೆ.
ಬೆಡ್ ರೂಮ್‌ನಲ್ಲಿ ವಾಣಿ ಮೃತದೇಹ
ನಂತರ ಉಮಾ ಮತ್ತು ಮನೆಗೆಲಸದ ಮಹಿಳೆ ನಕಲಿ ಕೀ ಬಳಸಿ ಮನೆಯೊಳಗೆ ಹೋಗಿದ್ದಾರೆ. ಬೆಡ್‌ರೂಮ್‌ನ ನೆಲದ ಮೇಲೆ ವಾಣಿ ಜಯರಾಮ್ ಅವರ ಮೃತದೇಹ ಇತ್ತು. ಅವರ ಹಣೆಯ ಮೇಲೆ ಏಟು ಬಿದ್ದಿರುವ ಗುರುತುಗಳು ಕಂಡಿವೆ. ತಕ್ಷಣವೇ ವಾಣಿ ಸಹೋದರಿ ಉಮಾ ಮತ್ತು ಮನೆಗೆಲಸದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ವಾಣಿ ಜಯರಾಮ್ ಅವರ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ವಿಧಿವಿಜ್ಞಾನ ತಂಡದವರು ಆಗಮಿಸಿ ಮನೆಯನ್ನು ತಪಾಸಣೆ ಮಾಡಿದ್ದಾರೆ. 'ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ..' ಎಂದು ಪೊಲೀಸ್ ಅಧಿಕಾರಿ ಶೇಖರ್ ದೇಶ್‌ಮುಖ್ ತಿಳಿಸಿದ್ದಾರೆ.
ಹೆಸರಾಂತ ಗಾಯಕಿ ವಾಣಿ ಜಯರಾಮ್
ಗಾಯಕಿ ವಾಣಿ ಜಯರಾಮ್ ಅವರಿಗೆ ಈಚೆಗಷ್ಟೇ ಪದ್ಮಭೂಷಣ ಪ್ರಶಸ್ತಿ ಘೋಷಣೆ ಆಗಿತ್ತು. 1971ರಲ್ಲಿ 'ಗುಡ್ಡಿ' ಚಿತ್ರಕ್ಕೆ ಹಾಡುವ ಮೂಲಕ ಸಿನಿಮಾರಂಗಕ್ಕೆ ವಾಣಿ ಜಯರಾಮ್ ಪ್ರವೇಶಿಸಿದ್ದರು. ಆನಂತರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಸೇರಿದಂತೆ ಭಾರತದ 19 ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಗೀತೆಗಳನ್ನು ಅವರು ಹಾಡಿದ್ದರು. ಕನ್ನಡದಲ್ಲಿ ಕಡೆಯದಾಗಿ ಅವರು 'ನೀಲಾ' ಚಿತ್ರಕ್ಕೆ ಹಾಡಿದ್ದರು. ಗಾಯನಕ್ಕಾಗಿ ಅವರಿಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಕನ್ನಡದಲ್ಲಿ ಅವರು 'ಎಂದೆಂದೂ ನಿನ್ನನು ಮರೆತು..', 'ಸುತ್ತ ಮುತ್ತ ಯಾರೂ ಇಲ್ಲ..', 'ಕನಸಲೂ ನೀನೇ ಮನಸಲೂ ನೀನೇ..', 'ಆ ಮೋಡ ಬಾನಲ್ಲಿ ತೇಲಾಡುತಾ..', 'ಇವ ಯಾವ ಸೀಮೆ ಗಂಡು ಕಾಣಮ್ಮೋ..', 'ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ..' ಮುಂತಾದ ನೂರಾರು ಜನಪ್ರಿಯ ಗೀತೆಗಳನ್ನು ಹಾಡಿದ್ದರು.